ಚಿತ್ರದುರ್ಗ -
ಕರ್ನಾಟಕ ರಾಜ್ಯದ ಒಂದು ಜಿಲ್ಲೆ ; ತಾಲ್ಲೂಕು ; ಅವುಗಳ ಆಡಳಿತ ಕೇಂದ್ರ. ಜಿಲ್ಲೆ ಉ.ಅ. 13ಔ 34'-15ಔ 02' ಮತ್ತು ಪೂ.ರೇ 75ಔ 37'-77ಔ 01' ನಡುವೆ ಇದೆ. ಉತ್ತರದಲ್ಲಿ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಉದ್ದಕ್ಕೆ ಉ.ಅ. 15ಔ 02' ವರೆಗೆ ಚಾಚಿಕೊಂಡಿದೆ. ಜಿಲ್ಲೆಯ ಉಳಿದ ಭಾಗ ಉ.ಅ. 14ಔ 40' ವರೆಗೆ ಮಾತ್ರ ಹಬ್ಬಿದೆ. ಉತ್ತರ-ದಕ್ಷಿಣವಾಗಿ ಜಿಲ್ಲೆಯ ಗರಿಷ್ಠ 85 ಮೈ. ಪೂರ್ವ-ಪಶ್ಚಿಮವಾಗಿ 100ಮೈ. ಉತ್ತರದ ಚಾಚು ಸು. 32 ಮೈ. ಉದ್ದ ಮತ್ತು 6-12 ಮೈಲಿ ಅಗಲವಾಗಿದೆ. ಉತ್ತರದಲ್ಲಿ ಬಳ್ಳಾರಿ ಜಿಲ್ಲೆ, ಪೂರ್ವದಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ, ಆಗ್ನೇಯದಲ್ಲಿ ತುಮಕೂರು ಜಿಲ್ಲೆ, ನೈಋತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಪಶ್ಚಿಮದಲ್ಲಿ ಶಿವಮೊಗ್ಗ ಜಿಲ್ಲೆ, ವಾಯುವ್ಯದಲ್ಲಿ ಧಾರವಾಡ ಜಿಲ್ಲೆ-ಇವು ಮೇರೆಗಳು. ಇದರ ವಿಸ್ತೀರ್ಣ 4,170,9 ಚ.ಮೈ (10,802,6 ಚ.ಮೈ.) ಜನಸಂಖ್ಯೆ 13,97,181 (1971).

ಇಡೀ ಜಿಲ್ಲೆ ವೇದಾವತಿ ಅಥವಾ ಹಗರಿ ನದೀಕಣಿವೆ ಪ್ರದೇಶ. ವಾಯುವ್ಯ ಗಡಿಯಲ್ಲಿ ಸ್ವಲ್ಪದೂರ ತುಂಗಭದ್ರಾ ನದಿ ಹರಿಯುತ್ತದೆ. ದಕ್ಷಿಣ-ಆಗ್ನೆಯದಿಂದ ಉತ್ತರ-ವಾಯುವ್ಯದ ಕಡೆಗೆ ಸಮಾಂತರದಲ್ಲಿ ಸಾಗುವ ತಗ್ಗಿನ ಬೆಟ್ಟಗಳ ಸಾಲುಗಳು ಬಹಳಮಟ್ಟಿಗೆ ನಗ್ನಶಿಲಾಮಯ. ಇವುಗಳ ನಡುನಡುವೆ ಕಣಿವೆಗಳುಂಟು. ಪೂರ್ವಸಾಲು ಹಿರಿಯೂರಿನ ಪಶ್ಚಿಮದಿಂದ ಚಿತ್ರದುರ್ಗದವರೆಗೆ (3,229') ಹಬ್ಬಿ, ಸ್ವಲ್ಪದೂರ ಬಿಟ್ಟು ಕಣಕುಪ್ಪ ಬೆಟ್ಟದಲ್ಲಿ ಮುಂದುವರಿದು ಜಿಲ್ಲೆಯ ಎಲ್ಲೆಯವರೆಗೂ ಸಾಗುತ್ತದೆ. ಈ ಸಾಲಿನ ಉನ್ನತ ಶಿಖರಗಳಲ್ಲಿ ಜೋಗಿಮರಡಿ ಒಂದು ; ಚಿತ್ರದುರ್ಗ ಪಟ್ಟಣಕ್ಕೆ ದಕ್ಷಿಣದಲ್ಲಿದೆ. ಪಶ್ಚಿಮ ಶ್ರೇಣಿ ಹೊಸದುರ್ಗದಲ್ಲಿ (3,226') ಆರಂಭವಾಗಿ ಮಾಯಕೊಂಡದ ಮೂಲಕ ಅಣಜಿಗೆ ಹಬ್ಬಿದೆ. ಮೊಳಕಾಲ್ಮೂರಿನ ಬಳಿ ಕೆಲವು ಶಿಲಾಬೆಟ್ಟಗಳುಂಟು. ಇವುಗಳಲ್ಲಿ ಮುಖ್ಯವಾದವು ನುಂಕೆಭೈರವ ಬೆಟ್ಟ (3,022), ಜಟಿಂಗರಾಮೇಶ್ವರ ಬೆಟ್ಟ (3,469') ಮತ್ತು ಶಾಂತಿಗುಡ್ಡ (2,595'). ಈ ಪ್ರದೇಶ ವಿಶಿಷ್ಟ ಸೌಂದರ್ಯದಿಂದ ಕೂಡಿದ್ದೆಂದು ಬ್ರೂಸ್‍ಫೂಟ್ ಬರೆದಿದ್ದಾನೆ. ಬೆಟ್ಟಗಳ ಶ್ರೇಣಿಗಳನ್ನು ಬಿಟ್ಟರೆ ಜಿಲ್ಲೆಯ ಉಳಿದ ಭಾಗ ಮಟ್ಟಸವಾದ ಮೈದಾನ. ಅಂಥ ವೈವಿದ್ಯವೇನೂ ಇಲ್ಲ. ಇಡೀ ಜಿಲ್ಲೆ ಸಮುದ್ರಮಟ್ಟದಿಂದ ಸಾಮಾನ್ಯವಾಗಿ 2,000' ಎತ್ತರದಲ್ಲಿದೆ. ಚಿತ್ರದುರ್ಗದಲ್ಲಿ ನೆಲದ ಔನ್ನತ್ಯ 2,383', ಹಿರಿಯೂರಿನಲ್ಲಿ 1965,' ಹರಿಹರದಲ್ಲಿ 1,830', ಕಣಕುಪ್ಪೆ ಬೆಟ್ಟ 2,721' ಇದೆ. ಹೊಸದುರ್ಗ ತಾಲ್ಲೂಕಿನ ಹಲರಾಮೇಶ್ವರ ಗುಡ್ಡ (3,875') ಈ ಜಿಲ್ಲೆಯ ಅತ್ಯುನ್ನತ ಶಿಖರ. ಚಿತ್ತದುರ್ಗ ನಗರದ ದಕ್ಷಿಣದಲ್ಲಿರುವ ಜೋಗಿಮರಡಿ ಪ್ರದೇಶದ ಬೀರನದುರ್ಗದ (ಬೀರನಗುಟ್ಟ) ಎತ್ತರ 3,863'. ಎಚ್ಚಲುಗುಡ್ಡ (3,804'), ಜೋಗಿಮಟ್ಟಿ (3,803') ಇವು ಇನ್ನೆರಡು ಮುಖ್ಯ ಶಿಖರಗಳು.

ಚಿತ್ರದುರ್ಗದ ವಾಯುವ್ಯದಲ್ಲಿ ತುಂಗಭದ್ರಾ ನದಿ 29 ಮೈ. ದೂರ, ಈ ಜಿಲ್ಲೆಗೂ ಧಾರವಾಡ ಜಿಲ್ಲೆಗೂ ನಡುವೆ ಹರಿಯುತ್ತದೆ. ನದಿಯ ಕಡಿದಾದ ಬಲದಂಡೆ ಈ ಜಿಲ್ಲೆಯ ಅಂಚು. ಏತದ ಮೂಲಕ ನೀರಾವರಿ ಸಾಧ್ಯ. ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ತೋಡಿರುವ ಎರಡು ನಾಲೆಗಳು ದಾವಣಗೆರೆ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಸಾಗುತ್ತವೆ. ವೇದಾವತಿ ನದಿ ಈ ಜಿಲ್ಲೆಯಲ್ಲಿ 129 ಮೈ. ದೂರ ಹರಿಯುತ್ತದೆ. ಬ್ರಹ್ಮಗಿರಿ ದುರ್ಗದ ದಕ್ಷಿಣಕ್ಕಿರುವ ಮಾರಿಕಣಿವೆಯಲ್ಲಿ ಈ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಿ ವಾಣಿವಿಲಾಸಸಾಗರ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಜಲಾಶಯ ಹಿರಿಯೂರು ತಾಲ್ಲೂಕಿನ ಜಮೀನುಗಳಿಗೆ ನೀರು ಪೂರೈಸುತ್ತದೆ. ನದಿ ಮುಂದಕ್ಕೆ ಹಿರಿಯೂರಿನ ಬಳಿ ಹರಿದು ಚಳ್ಳಕೆರೆ ತಾಲ್ಲೂಕಿನ ಘಟಪರ್ತಿಯ ಬಳಿ ಜಿಲ್ಲೆಯ ಗಡಿಯನ್ನು ಬಿಟ್ಟು ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಜನಗನಹಳ್ಳ (ಚಿಕ್ಕಹಗರಿ) ಎಂಬುದು ಚಿತ್ರದುರ್ಗ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಹರಿದು ವೇದಾವತಿಯನ್ನು ಸೇರುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ತೊರೆಯ ಉದ್ದ 80 ಮೈ. ಭಟ್ಟರ ಹಳ್ಳಿ, ದೇವಸಮುದ್ರ ಮತ್ತು ಮಲ್ಲಳ್ಳಿ ಕೆರೆಗಳಿಗೆ ನೀರು ಒದಗುವುದು ಇದರಿಂದ, ಸ್ವರ್ಣಮುಖಿ ನದಿ ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಹಿರಿಯೂರು ತಾಲ್ಲುಕಿನ ಇಕ್ಕನೂರು ಬಳಿ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿ 7 ಮೈ. ದೂರ ಹರಿದು ವೇದಾವತಿಯನ್ನು ಸೇರುತ್ತದೆ ; ಕರಿಯಾಲದ ಬಳಿ ಅಣೆಕಟ್ಟು ಅದರ ನೀರನ್ನು ವ್ಯವಸಾಯಕ್ಕೆ ಬಳಸಲಾಗಿದೆ. ಹೊಳಲ್ಕೆರೆಯ ಪಶ್ಚಿಮ ಭಾಗದ ಬೆಟ್ಟಗಳಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯಲ್ಲಿ 45 ಮೈ. ದೂರ ಹರಿದು, ಹರಿಹರದ ಬಳಿ ತುಂಗಭದ್ರಾ ನದಿಯನ್ನು ಸೇರುವ ತೊರೆ ಸ್ಯಾಗಲಹಳ್ಳ. ದಾವಣಗೆರೆ ಮತ್ತು ಹರಿಹರ ತಾಲ್ಲೂಕುಗಳ ವ್ಯವಸಾಯಕ್ಕೆ ಈ ತೊರೆ ಉಪಯುಕ್ತ. ಈ ಜಿಲ್ಲೆಯಲ್ಲಿ ಹರಿಯುವ ಗರಣಿ ಮತ್ತು ನಾಯಕನಹಟ್ಟಿ ತೊರೆಗಳು ಹಿರಿಯೂರಿಗೆ 7 ಮೈ. ದೂರದಲ್ಲಿ ವೇದಾವತಿಯನ್ನು ಸೇರುತ್ತದೆ. ಜಿಲ್ಲೆಯಲ್ಲಿ ಮಳೆ ಕಡಿಮೆ. ಬೇಸಿಗೆಯ ತಾಪ ಹೆಚ್ಚು ; ಚಳಿಗಾಲ ಹಿತಕರ. ಚಳಿಗಾಲದ ಸರಾಸರಿ ಉಷ್ನತೆ 27.9 ಸೆಂ.(82.3 ಫ್ಯಾ.) ಬೇಸಿಗೆಯಲ್ಲಿ 36.2 ಸೆಂ.(97.2 ಫ್ಯಾ.)-41ಸೆಂ.(106ಫ್ಯಾ). ಸರಾಸರಿ ವಾರ್ಷಿಕ ಮಳೆ 379.3 ಮಿಮೀ (22.81").

ಚಿತ್ರದುರ್ಗ ಜಿಲ್ಲೆಯಲ್ಲಿ ಕುರುಚಲು ಕಾಡುಗಳೇ ಹೆಚ್ಚು. ಮಳೆ ಹೆಚ್ಚಾಗಿಲ್ಲದ ಭಾಗಗಳಲ್ಲಿ ಹುಣಸೆ, ಮಾವು, ಹಿಪ್ಪೆ ಮರಗಳು, ಜಾಲಿ ಜಾತಿಯ ಗಿಡಗಳು ಮತ್ತು ಸೀತಾಫಲ ಬೆಳೆಯುತ್ತವೆ. ತಂಪು ತಿಂಗಳುಗಳಲ್ಲಿ ಚಳ್ಳಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳ ಅಮೃತ ಮಹಲ್ ಹುಲ್ಲುಗಾವಲುಗಳು ಅಚ್ಚ ಹಸಿರಾಗಿರುತ್ತವೆ. ಹೊಸದುರ್ಗ ಬಳಿಯ ವೇದಾವತಿ ಕಣಿವೆ ಸಸ್ಯಸಂಪದ್ಯುಕ್ತವಾದ್ದು. ಜೋಗಿಮಟ್ಟಿ ಬೆಟ್ಟಗಳ ಬಳಿ ಬಿದಿರುಮೆಳೆಗಳು ಉಂಟು. ಜಿಲ್ಲೆಯ ಅರಣ್ಯ ಭಾಗ 2,13,813 ಡಕರೆ ಚೌಬೀನೆಗೆ ಯೋಗ್ಯವಾದ ಕಮ್ಮರ, ಸೋಮೆ (ಸ್ವಾಮಿ ಮರ) ಮತ್ತು ಕೆಂಪು ಖೈರ ಮರಗಳು ಅಲ್ಲಿ ಬೆಳೆಯುತ್ತವೆ. ಇತರ ಬಗೆಯ ಮರಗಳು ದಿಂಡಿಗ, ಬೇವು, ಕಕ್ಕೆ, ಚುಜ್ಜುಲು. ತಂಗಡಿ ಮತ್ತು ಬಂದರಿಕೆ ಗಿಡಗಳು ವ್ಯಾಪಕವಾಗಿ ಬೆಳೆದುಕೊಂಡಿವೆ.

ಬೆಟ್ಟಗುಡ್ಡಗಳಲ್ಲಿ ಚಿರತೆ, ಕತ್ತೆಕಿರುಬ, ಕರಡಿ, ಕಾಡುಹಂದಿಗಳಿವೆ. ಹುಲಿಗಳೂ ಉಂಟು. ಜಿಂಕೆಗಳು ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಹೆಚ್ಚು. ಅಳಿಲು ಮತ್ತು ಮಂಗಗಳು ಇತರ ಪ್ರಾಣಿಗಳು. ಉರಗ ಜಾತಿಯಲ್ಲಿ ನಾಗರಹಾವು, ಮಂಡಲದ ಹಾವು ಹೆಚ್ಚು. ಮಂಡರಗಪ್ಪೆ ಮತ್ತು ಇತರ ಬಗೆಯ ಚೇಳುಗಳುಂಟು. ತುಂಗಭದ್ರಾ ನದಿಯಲ್ಲಿ ಮೊಸಳೆಗಳಿವೆ. ಕಾಡು ಕಾಗೆ, ಮೈನ, ಮರಕುಟಿಗ, ಕಾಡು ಪಾರಿವಾಳ, ಹಸುರು ಪಾರಿವಾಳ, ಕಾಡುಕೋಳಿ, ಕವುಜಗ, ನೀರು ಕೋಲಿ, ಕೋಗಿಲೆ, ಬಾನಾಡಿ ಇವು ಜಿಲ್ಲೆಯಲ್ಲಿರುವ ಪಕ್ಷಿಗಳಲ್ಲಿ ಮುಖ್ಯವಾದುವು. ಮತ್ತೊಂದು ಬಳಿ ಕೊಕ್ಕರೆಗಳುಂಟು. ಗಾಯಿತ್ರಿ ಜಲಾಶಯ, ವಾಣಿವಿಲಾಸ ಸಾಗರ ಮತ್ತು ಕೆರೆಗಳಲ್ಲಿ ಗೆಂಡೆ, ಕೊಳಸ, ಕೆಮ್ಮೀನು, ಮಚಲು, ಬಾಳೆಮೀನು, ಮೀಸೆಗಿರಲು, ಹೂಮೀನು, ಕುಚ್ಚು, ಕೊರಚ, ಹಾವುಮೀನು, ಸೀಗಡಿ ಮುಂತಾದ ಮೀನುಗಳಿವೆ.

ಜಿಲ್ಲೆಯಲ್ಲಿ ವಿವಿಧ ಖನಿಜಗಳ ಪದರ ಶಿಲೆಗಳುಂಟು. ಚಿತ್ರದುರ್ಗಕ್ಕೆ ದಕ್ಷಿಣದಲ್ಲಿ ಈ ಶಿಲಾಸ್ತರಗಳ ಗರಿಷ್ಠ ಅಗಲ 25 ಮೈ. ಜಿಲ್ಲೆಯ ಮುಖ್ಯ ಖನಿಜಗಳು ಕಲ್ನಾರು, ಅನ್ಟಿಮೊನಿ, ಬಾಕ್ಸೈಟ್, ತಾಮ್ರ, ಕಬ್ಬಿಣದ ಅದುರು, ಸುಣ್ಣಗಲ್ಲು, ಮ್ಯಾಂಗನೀಸ್, ಸೀಸ, ಬೆಣಚುಕಲ್ಲು, ಸ್ಫಟಿಕಶಿಲೆ, ಹಾಸುಗಲ್ಲು (ಕಡಪಕಲ್ಲು).

ಕಮಿಷನರ ಆಡಳಿತವನ್ನು ಕೊನೆಗೊಳಿಸಿ ಬ್ರಿಟಿಷರು ಒಡೆಯರ ಆಡಳಿತಕ್ಕೆ ಮೈಸೂರು ಸಂಸ್ಥಾನವನ್ನು ವಹಿಸಿಕೊಟ್ಟಮೇಲೆ ಚಿತ್ರದುರ್ಗದ ಮತ್ತು ತುಮಕೂರು ಜಿಲ್ಲೆಗಳನ್ನು ಒಳಗೊಂಡಿತ್ತು. 1863ರಲ್ಲಿ ಆ ವಿಭಾಗವನ್ನು ರದ್ದುಮಾಡಿ ಚಿತ್ರದುರ್ಗ ಜಿಲ್ಲೆಯನ್ನು ನಗರ ವಿಭಾಗಕ್ಕೆ ಸೇರಿಸಿ, ತುಮಕೂರು ಜಿಲ್ಲೆಯನ್ನು ನಂದಿದುರ್ಗ ವಿಭಾಗಕ್ಕೆ ಸೇರಿಸಲಾಯಿತು. 1879ರಲ್ಲಿ ಈ ವ್ಯವಸ್ಥೆ ರದ್ದಾಯಿತು. 1882ರಲ್ಲಿ ಚಿತ್ರದುರ್ಗವನ್ನು ತುಮಕೂರು ಜಿಲ್ಲೆಗೆ ಸೇರಿಸಿ ಅದನ್ನೊಂದು ಉಪವಿಭಾಗವನ್ನಾಗಿ ಮಾಡಲಾಯಿತು. 1886ರಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಮತ್ತೆ ಸ್ತಾಪಿಸಿ ಪಾವಗಡ ತಾಲ್ಲೂಕನ್ನು ತುಮಕೂರು ಜಿಲ್ಲೆಗೆ ಸೇರಿಸಲಾಯಿತು. 1956ರಲ್ಲಿ ರಾಜ್ಯ ಪುನರ್ವಿಂಗಡಣೆಯಾದಾಗ ಚಿತ್ರದುರ್ಗ ಜಿಲ್ಲೆ ಬೆಂಗಳೂರು ವಿಭಾಗದ ಅಂಗವಾಯಿತು. ಈ ಜಿಲ್ಲೆಯಲ್ಲಿ ಎರಡು ಉಪವಿಭಾಗಗಳೂ 9 ತಾಲ್ಲೂಕುಗಳೂ ಇವೆ. ಚಿತ್ರದುರ್ಗ ಉಪವಿಭಾಗಕ್ಕೆ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳೂ ದಾವಣಗೆರೆ ಉಪವಿಭಾಗಕ್ಕೆ ದಾವಣಗೆರೆ, ಜಗಳೂರು, ಹೊಸದುರ್ಗ, ಹೊಳಲ್ಕೆರೆ, ಹರಿಹರ ತಾಲ್ಲೂಕುಗಳೂ ಸೇರಿವೆ.

ಜಿಲ್ಲೆಯ ಕರಿಯ ಮಣ್ಣು ಫಲವತ್ತಾಗಿದೆ. ಮುಖ್ಯ ಬೆಳೆಗಳು ಹತ್ತಿ, ನೆಲಗಡಲೆ, ಜೋಳ, ತೊಗರಿ, ಬತ್ತ, ನವಣೆ, ಗೋದಿ, ಸಾಸುವೆ, ತಂಬಾಕು, ಬಾಳೆ, ಅಡಕೆ, ತೆಂಗು, ಕೆರೆಗಳು ವ್ಯವಸಾಯಕ್ಕೆ ಮುಖ್ಯ ಆಶ್ರಯ. ಹಿರಿಯೂರು ತಾಲ್ಲೂಕಿನ ವಾಣಿವಿಲಾಸಸಾಗರದ 28,000 ಎಕರೆ ಭೂಮಿಗೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿರುವ ಗಾಯಿತ್ರಿ ಜಲಾಶಯ 3,000 ಎಕರೆ ಭೂಮಿಗೆ ನೀರು ಒದಗಿಸುತ್ತದೆ.

ಹೊಸದುರ್ಗ, ಚಿತ್ರದುರ್ಗ, ಜಗಳೂರು ತಾಲ್ಲೂಕುಗಳಲ್ಲಿ ಮ್ಯಾಂಗನೀಸ್ ಗಣಿಗಳುಂಟು. 1965ರಲ್ಲಿ 39,245 ಟನ್ ಮ್ಯಾಂಗನೀಸ್ ಉತ್ಪಾದನೆಯಾಯಿತು. ಕಬ್ಬಿಣದ ಗಣಿಗಳಲ್ಲಿ ಉತ್ಪನ್ನವಾಗುವ ಅದುರು 2,09,398 ಟನ್. ಹರಿಹರ ತಾಲ್ಲೂಕು ಯಂತ್ರಪುರದ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಯಂತ್ರೋಪಕರಣಗಳು ತಯಾರಾಗುತ್ತವೆ. ದಾವಣಗೆರೆಯಲ್ಲಿ ಹತ್ತಿ ಗಿರಣಿಗಳುಂಟು. ಎಣ್ಣೆ ಗಿರಣಿಗಳು ದಾವಣಗೆರೆ ಚಳ್ಳಕೆರೆ, ಚಿತ್ರದುರ್ಗ ಮತ್ತು ಹರಿಹರಗಳಲ್ಲಿವೆ. ಜಗಲೂರು ಮತ್ತು ದಾವಣಗೆರೆ ತಾಲ್ಲೂಕುಗಳಲ್ಲಿ ಕಂಬಳಿ ನೇಯುತ್ತಾರೆ. ಹಿರಿಯೂರಿನಲ್ಲಿ ಸಕ್ಕರೆ ಕಾರ್ಖಾನೆ ಇದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 1,300 ಮೈ. ರಸ್ತೆಗಳುಂಟು. ಅವುಗಳಲ್ಲಿ ರಾಷ್ಟ್ರೀಯ ಹೆದ್ದಾರಿ 113 ಮೈ. ರಾಜ್ಯ ಹೆದ್ದಾರಿ 205 ಮೈ. ಬೆಂಗಳೂರು-ಪುಣೆ ಮೀಟರ್ ಗೇಜ್ ರೈಲುಮಾರ್ಗ ಚಿತ್ರದುರ್ಗ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಜಿಲ್ಲೆಯಲ್ಲಿ ಇದರ ಉದ್ದ 61 ಮೈ. ; 11 ನಿಲ್ದಾಣಗಳಿವೆ. ಅವು ಶಿವನಿ, ಹೊಸದುರ್ಗ ರೋಡ್, ರಾಮಗಿರಿ, ಹೊಳಲ್ಕೆರೆ, ಚಿಕ್ಕಜಾಜೂರು, ಸಾಸಲು, ಮಾಯಕೊಂಡ, ಕಡಗನೂರು, ತೊಳಹುಣಸಿ, ದಾವಣಗೆರೆ ಮತ್ತು ಹರಿಹರ, ಚಿಕ್ಕಜಾಜೂರಿನಿಂದ ಚಿತ್ರದುರ್ಗಕ್ಕೆ 21 ಮೈ. (34 ಕಿಮೀ.) ದೂರದ ಮೀಟರ್ ಗೇಜ್ ರೈಲುಮಾರ್ಗವುಂಟು.

ಚಿತ್ರದುರ್ಗದಲ್ಲಿ 12 ಪಟ್ಟಣಗಳಿವೆ. ಜಿಲ್ಲೆಯ ದೊಡ್ಡ ಪಟ್ಟಣ ದಾವಣಗೆರೆ.

ತಾಲ್ಲೂಕು : ಚಿತ್ರದುರ್ಗ ತಾಲ್ಲೂಕಿನ ವಿಸ್ತೀರ್ಣ 527.7 ಚ. ಮೈ. (1,366.7 ಚ.ಮಿಮೀ) ಚಿತ್ರದುರ್ಗ, ಹಿರೇಗುಂಟನೂರು, ಭರ್ಮಸಾಗರ, ತುರುವನೂರು- ಇವು ಇದರ ಹೋಬಳಿಗಳು. ತಾಲ್ಲೂಕಿನಲ್ಲಿ 161 ಗ್ರಾಮಗಳಿವೆ.
ಚಿತ್ರದುರ್ಗ ಪಟ್ಟಣ : ಜಿಲ್ಲೆಯ ಆಡಳಿತಕೇಂದ್ರ. ಇದು ಚಿಕ್ಕಜಾಜೂರು ರೈಲ್ವೆ ನಿಲ್ದಾಣದಿಂದ 34 ಕಿಮೀ. ದೂರದಲ್ಲಿ, ಬೆಂಗಳೂರಿನ ವಾಯುವ್ಯಕ್ಕೆ 126 ಮೈ. ದೂರದಲ್ಲಿ ಇದೆ. ಜನಸಂಖ್ಯೆ 50,275 (1971). ಹಿಂದೆ ಇದಕ್ಕೆ ಇದ್ದ ಹೆಸರುಗಳು ಹಿಡಿಂಬಾ ಪಟ್ಟಣ, ಚಿನ್ನಮುಲಾದ್ರಿ, ಬೆಮ್ಮೆಟ್ಟನಕಲ್ಲು, ಸೂಳಗಲ್, ಪೆರುಮಾಳೆಪುರ, ಚಿತ್ರಕಲ್‍ದುರ್ಗ, ಮಲ್ಲರಾಯನದುರ್ಗ, ಇದಕ್ಕೆ ಟೀಪು ಸಲ್ತಾನ ಕೊಟ್ಟ ಹೆಸರು ಫರೂಕಾಬಾದ್. ನಗರದ ಇತಿಹಾಸ ಕರ್ನಾಟಕವನ್ನಾಳಿದ ಅರಸು ಮನೆತನಗಳ ಹಾಗೂ ಈ ಭಾಗದ ಪಾಳೆಯಗಾರರ ಇತಿಹಾಸದೊಂದಿಗೆ ಸೇರಿದೆ.

ಹಳೆಯ ಪಟ್ಟಣ ಒತ್ತಾದ ಬಂಡೆಗಳ ಮಧ್ಯೆ, ಕೋಟೆಯಿಂದ ಕೂಡಿ ಈಶಾನ್ಯ ಭಾಗದಲ್ಲಿದೆ. ಕೋಟೆಯ ಏಳು ಸುತ್ತುಗಳಲ್ಲಿ ಮೂರು ಸುತ್ತು ಚಿತ್ರದುರ್ಗ ಬೆಟ್ಟದ ತಳಭಾಗದಲ್ಲಿ ನಾಲ್ಕು ಸುತ್ತು ಬೆಟ್ಟದ ಮೇಲೆ ಇವೆ. ಹೊರಗಿನ ಕೋಟೆಗೆ ನಾಲ್ಕು ಬಾಗಿಲುಗಳು, ಅವುಗಳಲ್ಲಿ ರಂಗಯ್ಯನ ಬಾಗಿಲು (ಸಿರಾದರ್ವಾeóÁ) ಪೂರ್ವಕ್ಕೂ ಸಂತೆ ಬಾಗಿಲು (ಸಿದ್ಧಯ್ಯನ ಬಾಗಿಲು) ಪಶ್ಚಿಮಕ್ಕೂ ಇವೆ. ನೈಋತ್ಯಕ್ಕಿರುವುದು ಛತ್ರಿ ಬಂಡೆ. ನಗರದ ದಕ್ಷಿಣಕ್ಕಿರುವ ಬೆಟ್ಟದ ತುದಿಯಲ್ಲಿ ಬೇಡರ ದೇವತೆ ಓಬಳಾದೇವಿಯ ಗುಡಿಯಿದೆ.

ಚಿತ್ರದುರ್ಗ ಕೋಟೆಯಲ್ಲಿ ಒಟ್ಟು 19 ದ್ವಾರಗಳು, 38ದಿಡ್ಡೀ ಬಾಗಿಲುಗಳು, 35 ಗುಪ್ತದ್ವಾರಗಳು, 4 ಸುರಂಗಮಾರ್ಗಗಳು ಇದ್ದುವೆಂದು ಹೇಳಲಾಗಿದೆ. ಪಾಳೆಯಗಾರರ ಪಾಳುಬಿದ್ದ ಅರಮನೆಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಕಲ್ಲಿ ಕೋಟೆಯನ್ನು ಹೈದರ್ ಮತ್ತು ಟೀಪು ಕಟ್ಟಿಸಿದರು.

ಚಿತ್ರದುರ್ಗ ಬೆಟ್ಟದ ಮೇಲೆ 14 ದೇವಾಲಯಗಳುಂಟು ಅವುಗಳಲ್ಲಿ ಪ್ರಮುಖವಾದವು ಸಂಪಿಗೆ ಸಿದ್ಧೇಶ್ವರ, ಹಿಡಿಂಬೇಶ್ವರ, ಏಕನಾಥಮ್ಮ, ಫಲ್ಗುಣೇಶ್ವರ, ಗೋಪಾಲಕೃಷ್ಣ, ಆಂಜನೇಯ, ಸುಬ್ಬರಾಯ, ಬಸವೇಶ್ವರ ದೇವಾಲಯಗಳು. ಹಿಡಿಂಬೇಶ್ವರನ ಗುಡಿಯಲ್ಲಿ ಹಿಡಿಂಬಾಸುರನ ಹಲ್ಲು ಮತ್ತು 6 ಅಡಿಗಳ ಭೀಮನ ಭೇರಿ ಇವೆ. ಹೈದರ್ ಮತ್ತು ಟೀಪು ಫಿರಂಗಿ ಮದ್ದನ್ನು ತಯಾರಿಸುತ್ತಿದ್ದ ದೊಡ್ಡ ಬೀಸುವ ಕಲ್ಲುಗಳುಂಟು. ಹೈದರನ ಸೈನಿಕರನ್ನು ಓಬವ್ವ ಸದೆಬಡಿದ ಒನಕೆ ಕಿಂಡಿಯನ್ನೂ ಕಾಣಬಹುದು.
ಬೆಟ್ಟದ ತಪ್ಪಲಲ್ಲಿ ಉಚ್ಚಂಗಿಯಮ್ಮ (ಉತ್ಸಂವಾಂಬ) ದೇವಾಲಯವಿದೆ. ಅಲ್ಲಿ ಭಾರಿ ದೀಪದ ಸ್ತಂಭ ಮತ್ತು ಉಯ್ಯಾಲೆ ಮಂಟಪ ಇವೆ. ಕೋಟೆಯೊಳಗೆ ಪೂರ್ವದಿಂದ ಪಶ್ಚಿಮಕ್ಕೆ ಹರಿದಿರುವುದು ರಥದ ಬೀದಿ. ಅದಕ್ಕೆ ದೊಡ್ಡಪೇಟೆ ಎಂದು ಹೆಸರಿತ್ತು. ಪಟ್ಟಣದ ಹೊಸ ಬಡಾವಣೆ ಕೋಟೆಗೆ ಈಶಾನ್ಯ ಭಾಗದಲ್ಲಿ ಬೆಳೆದುಕೊಂಡಿದೆ. ಸರ್ಕಾರಿ ಕಛೇರಿಗಳು ಇರುವುದು ಹಳೆಯ ಪಟ್ಟಣಕ್ಕೂ ಹೊಸ ಬಡಾವಣೆಗಳಿಗೂ ನಡುವೆ. ಕಛೇರಿಗಳ ದಕ್ಷಿಣ ಭಾಗದಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಪ್ರಥಮದರ್ಜೆ ಕಾಲೇಜ್ ಇವೆ.

	ನಗರದ ವಾಯುವ್ಯದಲ್ಲಿ ಮೂರು ಮೈ. ದೂರದಲ್ಲಿ ಮುರುಘರಾಜೇಂದ್ರ ಮಠ, ಪಶ್ಚಿಮದ ಗುಡ್ಡಗಳ ನಡುವೆ ಅಂಕ್ಲಿ ಮಠ ಇವೆ. ಅಂಕ್ಲಿ ಮಠ ನೆಲಮಾಳಿಗೆಗಳಿಂದ ಕೂಡಿದ್ದು. ಚಿತ್ರದುರ್ಗದಿಂದ ವಿವಿಧ ಭಾಗಗಳಿಗೆ ಬಸ್ ಅನುಕೂಲವುಂಟು. ಚಿಕ್ಕಜಾಜೂರಿನಿಂದ ಚಿತ್ರದುರ್ಗಕ್ಕೆ ರೈಲುಮಾರ್ಗವಿದೆ.
				 (ವಿ.ಜಿ.ಕೆ.)
ಇತಿಹಾಸ : ಇಲ್ಲಿ ಇತಿಹಾಸಪೂರ್ವದ ಶಿಲಾಯುಗದಿಂದಲೂ ಜನವಸತಿ ಇತ್ತೆಂಬುದು ಜಿಲ್ಲೆಯ ಹಲವು ಭಾಗಗಳಲ್ಲಿ ದೊರೆತಿರುವ ಬೃಹತ್ ಶಿಲಾಸಮಾಧಿಗಳು ಮತ್ತು ಇತರ ಪ್ರಾಚೀನ ಅವಶೇಷಗಳಿಂದಲೂ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಗಳಲ್ಲಿ ನಡೆಸಿರುವ ಉತ್ಖನನಗಳಿಂದಲೂ ಸ್ಪಷ್ಟಪಟ್ಟಿದೆ. ಇಲ್ಲಿಯ ಇತಿಹಾಸವನ್ನು ಕ್ರಿ. ಪೂ. 3ನೆಯ ಶತಮಾನದಿಂದಲೂ ಗುರುತಿಸಬಹುದು. ಈ ಜಿಲ್ಲೆ ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತೆಂಬುದು ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರಗಳಲ್ಲಿ ದೊರೆತಿರುವ ಅಶೋಕನ ಶಾಸನಗಳಿಂದ ವ್ಯಕ್ತವಾಗುತ್ತದೆ. ಮೌರ್ಯರ ಅನಂತರ ಶಾತವಾಹನರು ಇಲ್ಲಿ ಆಳಿದರು. ಅವರ ಶಾಸನಗಳು ದೊರೆಯದಿದ್ದರೂ ಚಂದ್ರವಳ್ಳಿಯಲ್ಲಿ ಅವರ ಅನೇಕ ಸೀಸದ ನಾಣ್ಯಗಳು ದೊರೆತಿವೆ. ಅವುಗಳಲ್ಲಿ ಸಡಕಣಲಾಯ, ಗೌತಮೀಪುತ್ರ ವಿಳಿವಾಯಕುರ, ಮುಂಡಾನಂದ, ಯಜ್ಞಶ್ರೀ ಶಾತಕರ್ಣಿ ಮುಂತಾದ ಹೆಸರುಗಳಿವೆ. ಶಾತವಾಹನರ ಮಾಂಡಲಿಕರಾಗಿದ್ದ ಚುಟುಕುಲದ ಅರಸರು ಚಂದ್ರವಳ್ಳಿಯಲ್ಲಿ ಆಳುತ್ತಿದ್ದರು. 1-2ನೆಯ ಶತಮಾನಗಳಲ್ಲಿ ಇವರು ರೋಂ ಚಕ್ರಾಧಿಪತ್ಯದೊಡನೆ ವ್ಯಾಪಾರ ಸಂಬಂಧ ಹೊಂದಿದ್ದರು. ಇಲ್ಲಿ ಆಗಸ್ಟಸ್ ಮತ್ತು ಟೈಬೀರಿಯಸ್ ಚಕ್ರವರ್ತಿಗಳ ನಾಣ್ಯಗಳೂ ರೂಲೆಟ್ ಮಣ್ಣಿನ ತಟ್ಟೆಗಳೂ (ಗಟ್ಟಿ ಜೇಡಿ ಮಣ್ಣಿನಿಂದ, ಒಳಭಾಗದ ಮಧ್ಯದಲ್ಲಿ ಉರುಳುಹಲ್ಲುಚಕ್ರದಿಂದ ಕಿರುಗೆರೆ ಅಥವಾ ಬಿಂದುಗಳ ವೃತ್ತಗಳನ್ನು ಮೂಡಿಸಿ ಅಂಚುಗಳು ಒಳಕ್ಕೆ ಬಾಗಿರುವಂತೆ ತಯಾರಿಸಿದ ತಟ್ಟೆ-ರೂಲೆಟೆಡ್ ವೇರ್) ದೊರೆತಿವೆ. ಮುಂದೆ ಈ ಜಿಲ್ಲೆ ಬನವಾಸಿ ಕದಂಬರಿಗೆ ಸೇರಿತು. ಕದಂಬ ಮಯೂರವರ್ಮ ಗೆದ್ದ ರಾಜ್ಯಗಳನ್ನು ಅವನ ಚಂದ್ರವಳ್ಳಿ ಶಾಸನ ತಿಳಿಸುತ್ತದೆ. ಅಲ್ಲಿ ಅವನು ಒಂದು ಕೆರೆಯನ್ನು ಕಟ್ಟಿಸಿದನೆಂದೂ ಶಾಸನದಿಂದ ಗೊತ್ತಾಗುತ್ತದೆ. ಕದಂಬ ಕೃಷ್ಣವರ್ಮನಿಗೂ ಸಣಕ್ಕಸ ಪಲ್ಲವನಿಗೂ ನಡೆದ ಯುದ್ಧದಲ್ಲಿ ಕೃಷ್ಣವರ್ಮ ಸೋತ. ಇದರ ಫಲವಾಗಿ ಶಿವಾನಂದವರ್ಮ ಅಣಜಿಯಲ್ಲಿ ಪ್ರಾಣತ್ಯಾಗ ಮಾಡಿದ. ಕದಂಬರು ಉಚ್ಚಂಗಿಯಿಂದಲೂ ಆಳುತ್ತಿದ್ದರು. ಮುಂದೆ ಚಾಳುಕ್ಯರಿಗೆ ಅಧೀನರಾದರು. ಚಿತ್ರದುರ್ಗ ಜಿಲ್ಲೆಯ ಪಶ್ಚಿಮ ಮತ್ತು ಉತ್ತರದ ಬಹುಭಾಗ ಕದಂಬಳಿಗೆ ಸಾವಿರದಲ್ಲಿ ಸೇರಿಹೋಗಿತ್ತು ; 8ನೆಯ ಶತಮಾನದಲ್ಲಿ ಚಾಳುಕ್ಯರಿಂದ ರಾಜ್ಯವನ್ನು ಕಿತ್ತುಕೊಂಡ ರಾಷ್ಟ್ರಕೂಟರಿಗೆ ಅಧೀನವಾಯಿತು. ಇದೇ ಕಾಲದಲ್ಲಿ ಈ ಜಿಲ್ಲೆಯ ಬಹುಭಾಗವನ್ನು ಆಳಲಾರಂಭಿಸಿದ ಮುಖ್ಯವಾದ ರಾಜಮನೆತನ ನೊಳಂಬ ಪಲ್ಲವರದು. ಇವರ ರಾಜಧಾನಿ ಹೆಂಜೇರು. ಮೊದಲು ನೊಳಂಬಳಿಗೆ ಸಾವಿರವಾಗಿದ್ದ ಇವರ ರಾಜ್ಯ ಮುಂದೆ ನೊಳಂಬವಾಡಿ 32000 ರಾಜ್ಯವಾಯಿತು. ಸ್ವಲ್ಪ ಕಾಲ ಸ್ವತಂತ್ರವಾಗಿಯೂ ಮತ್ತೆ ಸ್ವಲ್ಪ ಕಾಲ ಗಂಗರ ಅಥವಾ ರಾಷ್ಟ್ರಕೂಟರ ಅಧೀನವಾಗಿಯೂ ನೊಳಂಬರು ಆಳಿದರು. ಈ ಜಿಲ್ಲೆಯ ತೀರ ದಕ್ಷಿಣ ಭಾಗದಲ್ಲಿ ನಿರ್ಗುಂದ 300 ಪ್ರಾಂತ್ಯವಿತ್ತು. ಇದೂ ನೊಳಂಬರ ಅಧೀನದಲ್ಲಿತ್ತು. ಚಳ್ಳಕೆರೆ ತಾಲ್ಲೂಕಿನ ಹಿರೆಮಧುರೆಗಳು ಇವರ ಕಾಲದ ಮುಖ್ಯ ಊರುಗಳಾಗಿದ್ದುವು.

ಹತ್ತನೆಯ ಶತಮಾನದಲ್ಲಿ ಪುನಃ ಪ್ರಬಲರಾದ ಚಾಳುಕ್ಯರಿಗೆ ಈ ಭಾಗ ಸೇರಿತು. ನೊಳಂಬವಾಡಿ 32000ವನ್ನು ಸ್ವಲ್ಪ ಕಾಲ ಚಾಳುಕ್ಯ ಯುವರಾಜ ಜಯಸಿಂಹ ನೊಳಂಬ ಪಲ್ಲವ ಆಳಿದ. ನಿರ್ಗುಂದ 300ನ್ನು ಗೋವಿಂದ, ಚಟ್ಟ, ವಿಷ್ಣು ಮೊದಲಾದ ಸಾಮಂತರಾಜರು ಮೊದಲು ಚಾಳುಕ್ಯರಿಗೂ ಅನಂತರ ಹೊಯ್ಸಳರಿಗೂ ಅಧೀನರಾಗಿ ಹುಳಿಯಾರಿನಿಂದ ಆಳಿದರು. ಹನ್ನೊಂದನೆಯ ಶತಮಾನದಿಂದ ನೊಳಂಬವಾಡಿಯನ್ನು ಉಚ್ಚಂಗಿ ಪಾಂಡ್ಯರು ಚಾಳುಕ್ಯರ ಅಧೀನರಾಗಿ ಆಳಲಾರಂಭಿಸಿದರು. ಇವರಲ್ಲಿ ತ್ರಿಭುವನಮಲ್ಲ ಪಾಂಡ್ಯದೇವ, ವಿಜಯ ಪಾಂಡ್ಯದೇವ, ವೀರ ಪಾಂಡ್ಯದೇವ ಇವರು ಮುಖ್ಯರು. ಪಾಂಡ್ಯರು ಆಳುತ್ತಿದ್ದ ಜಿಲ್ಲೆಯ ಈ ಭಾಗಕ್ಕೆ ಪಾಂಡ್ಯರಾಜ್ಯ ಅಥವಾ ಪಾಂಡ್ಯಮಂಡಲವೆಂಬ ಹೆಸರಿತ್ತು. ಸುಮಾರು 1220ರ ವರೆಗೂ ಆಳಿದ ಪಾಂಡ್ಯರನ್ನು ಹೊಯ್ಸಳ ಇಮ್ಮಡಿ ವೀರಬಲ್ಲಾಳ ಸೋಲಿಸಿ ಪಾಂಡ್ಯನಾಡನ್ನು ಹೊಯ್ಸಳ ರಾಜ್ಯಕ್ಕೆ ಸೇರಿಸಿಕೊಂಡ ನೊಳಂಬವಾಡಿ, ನಿರ್ಗುಣದ 300 ಇವು ಹೊಯ್ಸಳ ರಾಜ್ಯದ ಪ್ರಾಂತ್ಯಗಳಾದುವು.

ಈ ಜಿಲ್ಲೆಯ ಪೂರ್ವಭಾಗವನ್ನು ಚೋಳಮನೆತನವೊಂದು ಚಾಳುಕ್ಯರ ಮಹಾಪಾಂಡಲೇಶ್ವರರಾಗಿ 12ನೆಯ ಶತಮಾನದಲ್ಲಿ ನಿಡ ಗಲ್ಲಿನಿಂದ ಆಳಿದರು. ಇವರಲ್ಲಿ ಇರುಂಗೋಳ ಚೋಳ ಮಹಾರಾಜ, ಮಲ್ಲಿದೇವ ಚೊಳ ಮಹಾರಾಜ, ಗೋವಿಂದರಾಯ, ಇರುಂಗೋಳದೇವ ಇವರನ್ನು ಹೆಸರಿಸಬಹುದು.

ದೇವಗಿರಿಯ ಯಾದವರೂ ಈ ಜಿಲ್ಲೆಯ ವಾಯುವ್ಯ ಭಾಗವನ್ನು ಸ್ವಲ್ಪ ಕಾಲ ತಮ್ಮ ಅಧೀನಕ್ಕೆ ಒಳಪಡಿಸಿಕೊಂಡಿದ್ದರು. ಅವರ ಒಬ್ಬ ಪ್ರಾಂತ್ಯಾಧಿಕಾರಿ ಸು. 1270ರ ಹೊತ್ತಿಗೆ ದಾವಣಗೆರೆಯ ಬಳಿಯ ಬೇತೂರಿನಿಂದ ಆಳುತ್ತಿದ್ದ ಆದರೆ 1287ರಲ್ಲಿ ಹೊಯ್ಸಳರು ಈ ಭಾಗವನ್ನೆಲ್ಲ ಆಕ್ರಮಿಸಿಕೊಂಡರು. ಇವರ ಕಾಲದಲ್ಲಿ ಬೆಮ್ಮತ್ತನಕಲ್ಲು (ಈಗಿನ ಚಿತ್ರದುರ್ಗ ಪಟ್ಟಣ) ಈ ಪ್ರಾಂತ್ಯದ ಮುಖ್ಯ ಪಟ್ಟಣವಾಯಿತು. ಹೊಯ್ಸಳರ ಕಾಲಾನಂತರ ಈ ಜಿಲ್ಲೆ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದಾಗಲೂ ಬೆಮ್ಮತ್ತನಕಲ್ಲು ಇಲ್ಲಿಯ ಮುಖ್ಯ ಪಟ್ಟಣವಾಗಿ ಮುಂದುವರಿಯಿತು. ಮುಂದೆ 15, 16ನೆಯ ಶತಮಾನಗಳಲ್ಲಿ ಹಲವು ಪಾಳೆಯಗಾರರು ಈ ಜಿಲ್ಲೆಯಲ್ಲಿ ಅಲ್ಲಲ್ಲಿ ಆಳಲಾರಂಭಿಸಿದರು. ಅವರಲ್ಲಿ ಮುಖ್ಯರಾದವರು ಚಿತ್ರದುರ್ಗ ಮತ್ತು ನಿಡುಗಲ್ ದುರ್ಗದ ಪಾಳೇಯಗಾರರು, ಕಾಮಗೇತಿ ವಂಶಕ್ಕೆ ಸೇರಿದ ಚಿತ್ರದುರ್ಗದ ಪಾಳೆಯಗಾರರು ಆರಂಭದಲ್ಲಿ ವಿಜಯನಗರಕ್ಕೆ ಅಧೀನರಾಗಿದ್ದು, 1564ರಲ್ಲಿ ವಿಜಯನಗರದ ಪತನಾನಂತರ ಸ್ವತಂತ್ರರಾಗಿ ಅಧಿಪತ್ಯ ನಡೆಸಿದರು. ಇವರಲ್ಲಿ ಮದಕರಿನಾಯಕ, ಕಸ್ತೂರಿ ರಂಗಪ್ಪನಾಯಕ, ಕುಮಾರ ಬರಮಪ್ಪ ನಾಯಕ ಮೊದಲಾದವರು ಪ್ರಬಲರು. ಆದರೆ ಒಂದು ಕಡೆ ಹೈದರನೊಂದಿಗೂ ಇವರು ಹೋರಾಡಬೇಕಾಯಿತು. ಕಟ್ಟಕಡೆಗೆ 1779ರಲ್ಲಿ ಹೈದರನಿಗೆ ಸೋತು ಈ ವಂಶ ಕೊನೆಗೊಂಡಿತು. ಕೋಟೆಯನ್ನು ಹೈದರ್ ಮತ್ತು ಟೀಪು ಬಲಪಡಿಸಿ, ಅಲ್ಲಿ ಬಲವಾದ ಸೈನ್ಯವನ್ನಿಟ್ಟಿದ್ದರು. ಬ್ರಿಟಿಷರು ಟೀಪುವನ್ನು ಸೋಲಿಸಿದ ಮೇಲೆ ಈ ಜಿಲ್ಲೆ ಮೈಸೂರರಸರಿಗೆ ಸೇರಿ ಚಿತ್ರಕಲ್ ಫೌeóïದಾರಿಯಾಗಿ ಮುಂದುವರಿಯಿತು. ಮೈಸೂರು ಸಂಸ್ಥಾನ ಬ್ರಿಟಿಷ್ ಕಮಿಷನರ ಆಡಳಿತಕ್ಕೆ ಒಳಪಟ್ಟಿದ್ದಾಗ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಸೇರಿ ಚಿತ್ರದುರ್ಗ ವಿಭಾಗವಾಗಿ, ತುಮಕೂರು ಇದರ ಮುಖ್ಯಕೇಂದ್ರವಾಯಿತು. 1865ರಲ್ಲಿ ಇದರಲ್ಲಿ ಮತ್ತೆ ಎರಡು ಭಾಗಗಳಾದುವು. ನಗರವಿಭಾಗಕ್ಕೆ ಚಿತ್ರದುರ್ಗ ಸೇರಿತು. 1879ರಲ್ಲಿ ಈ ವಿಭಾಗಗಳು ರದ್ದಾದುವು. ಚಿತ್ರದುರ್ಗ 1882ರಲ್ಲಿ ತುಮಕೂರು ಜಿಲ್ಲೆಯ ಒಂದು ಭಾಗವಾಯಿತು. ಈಗಿನ ಚಿತ್ರದುರ್ಗ ಜಿಲ್ಲೆ ಅಸ್ಥಿತ್ವಕ್ಕೆ ಬಂದದ್ದು 1886ರಲ್ಲಿ.

ಪುರಾತತ್ವ : ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಗಳಲ್ಲಿ ವಿಸ್ತಾರವಾದ ಭೂಶೋಧನೆ ನಡೆದು ಈ ಜಿಲ್ಲೆಯ ಪ್ರಾಕ್ತನ ಸಂಸ್ಕøತಿಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವಂತಾಗಿದೆ. ಬ್ರಹ್ಮಗಿರಿಯಲ್ಲಿ ನಡೆದ ಉತ್ಖನನದಲ್ಲಿ ಮೂರು ಬಗೆಯ ಸಂಸ್ಕøತಿಗಳು ಕಂಡುಬಂದವು. ಇವುಗಳಲ್ಲಿ ಅತ್ಯಂತ ಪ್ರಾಚೀನವಾದ್ದು ನವಶಿಲಾಯುಗದ ಸಂಸ್ಕøತಿ. ಈ ಸಂಸ್ಕøತಿಯ ಮುಖ್ಯವಾದ ಕುರುಹು ಕರಿಯ ಕಲ್ಲಿನ ಕೊಡಲಿಯಂಥ ಉಜ್ಜಿ ನಯ ಮಾಡಿದ ಆಯುಧಗಳು. ಚಂದ್ರವಳ್ಳಿಯಲ್ಲೂ ಇಂಥ ಕೆಲವು ಆಯುಧಗಳು ದೊರೆತಿವೆ. ಇದರ ಅನಂತರ ಬಂದದ್ದು ಕಬ್ಬಿಣ ಯುಗದ ಬೃಹತ್ ಶಿಲಾ ಸಂಸ್ಕøತಿ. ದಪ್ಪ ಗುಂಡುಗಳನ್ನು ದುಂಡಗೆ ಜೋಡಿಸಿ ಕಲ್ಲಿನ ಶವಪೆಟ್ಟಿಗೆಯಲ್ಲೋ ಆಳವಾದ ಕುಳಿಯಲ್ಲೋ ಹಲವಾರು ಬಗೆಯ ಹೊಳಪಿನ ಮಡಿಕೆಗಳನ್ನೂ ಕಬ್ಬಿಣದ ಆಯುಧಗಳನ್ನೂ ಇಟ್ಟು ವಿಶಿಷ್ಟವಾಗಿ ನಡೆಸುತಿದ್ದ ಶವಸಂಸ್ಕಾರ ಈ ಸಂಸ್ಕøತಿಯ ಹೆಗ್ಗುರುತು. ಬ್ರಹ್ಮಗಿರಿಯಲ್ಲಿ ಇಂಥ ಹಲವು ಬಗೆಯ ಸಮಾಧಿಗಳನ್ನು ಶೋಧಿಸಿ ಈ ಸಂಸ್ಕøತಿಯ ರೂಪುರೇಖೆಗಳನ್ನು ವಿಂಗಡಿಸಲಾಗಿದೆ. ಇಂಥ ಬೃಹತ್ ಶಿಲಾ ಸಮಾಧಿಗಳು ಬ್ರಹ್ಮಗಿರಿಯಲ್ಲಲ್ಲದೆ ಹಾಯಕಲ್ಲು, ಚಿಕ್ಕಮಧುರೆ, ತುರುವನೂರು ಮೊದಲಾದ ಕಡೆಗಳಲ್ಲೂ ಕಂಡುಬಂದಿದೆ. ಇದಾದ ಆನಂತರ ಇತಿಹಾಸದ ಆರಂಭಕಾಲದ ನಾಗರೀಕಥೆಯನ್ನು ಗುರುತಿಸಲಾಗಿದೆ. ಕ್ರಿ. ಪೂ. ಸು 3ನೆಯ ಶತಮಾನದಲ್ಲಿ ಆರಂಭವಾದ ಈ ಸಂಸ್ಕøತಿಯಲ್ಲಿ ಇಟ್ಟಿಗೆ ಕಟ್ಟಡಗಳನ್ನು ಕಟ್ಟಿದ್ದುದನ್ನು ಕಾಣಬಹುದು. ಬ್ರಹ್ಮಗಿರಿಯ ಗುಡ್ಡದ ಇಳಿಜಾರಿನಲ್ಲಿ ಕಟ್ಟಿದ್ದ ಚೈತ್ರಾಕಾರದ ಕಟ್ಟಡ ಇವುಗಳಲ್ಲಿ ಮುಖ್ಯವಾದ್ದು. ಇದು ಬ್ರಹ್ಮಗಿರಿಯ ಅಶೋಕನ ಶಾಸನದ ಬಳಿಯೇ ದೊರೆತಿದೆ. ಬ್ರಹ್ಮಗಿರಿ, ಸಿಧ್ದಾಪುರ ಮತ್ತು ಸಂಗಮೇಶ್ವರಗಳಲ್ಲಿ ಬಂಡೆಗಳ ಆಳವಾಗಿಯೂ ದಪ್ಪನಾಗಿಯು ಕೊರೆದಿರುವ ಅಶೋಕನ ಮೂರು ಶಾಸನಗಳು ಬ್ರಾಹ್ಮೀಲಿಪಿಯಲ್ಲಿವೆ. ಇವು ಈ ಜಿಲ್ಲೆಯ ಅತ್ಯಂತ ಪ್ರಾಚೀನವೂ ಪ್ರಮುಖವೂ ಆದ ಶಾಸನಗಳು, ಈ ಭಾಗದಲ್ಲಿ ಇಸಿಲಾ ಎಂಬ ಪಟ್ಟಣವಿದ್ದದ್ದು ಈ ಶಾಸನಗಳಿಂದ ವ್ಯಕ್ತವಾಗುತ್ತದೆ. ಶಾತವಾಹನರ ಕಾಲದ ನಾಗರಿಕಥೆಯ ಹಲವು ರೀತಿಯ ಅವಶೇಷಗಳನ್ನು ಚಂದ್ರವಳ್ಳಿಯಲ್ಲಿ ಕಾಣಬಹುದು. ಶಾತವಾಹನರ ಸೀಸದ ಮತ್ತು ಮಿಶ್ರಲೋಹದ ನಾಣ್ಯಗಳು, ರೋಮಿನ ಬೆಳ್ಳಿಯ ನಾಣ್ಯಗಳೂ, ಕಪ್ಪು ಕಡಂಪು ಬಣ್ಣದ ಹೊಳಪಿನ ಬಗೆಬಗೆಯ ಮಡಕೆಗಳು, ಅವುಗಳ ಮೇಲಿನ ರೇಖಾಚಿತ್ರಗಳು, ರೂಲೆಟ್ ತಟ್ಟೆಗಳು, ಜಾಡಿ ಮತ್ತು ಹೂಜಿಗಳು ಹಲವು ಬಗೆಯ ಮಣಿಗಳು ಮತ್ತು ಆಭರಣಗಳು ಇಲ್ಲಿ ದೊರೆತಿವೆ. ಬಹುಶಃ ಇದೇ ಕಾಲದಲ್ಲೆ ಬಂಡೆಗಳ ಮೇಲೆ ರೇಖೆಯಲ್ಲಿ ಬಿಡಿಸಲಾದ ಹುಲಿ, ಜಿಂಕೆ, ಕಾಡುಕೋಣಗಳ ಆಕೃತಿಗಳನ್ನು ಚಂದ್ರವಳ್ಳಿಯ ಬಳಿಯಲ್ಲೂ ಚಿತ್ರದುರ್ಗದ ಬೆಟ್ಟದ ಮೇಲೂ ನೋಡಬಹುದು.

ಅಂಕಲೆಮಠದ ಪರದೇಶಪ್ಪನ ಗವಿ, ಭವಳಪ್ಪನ ಗುಡ್ಡದ ಮೇಲಿನ ಗುಹಾ ದೇವಾಲಯ, ಚಿತ್ರದುರ್ಗದ ಬೆಟ್ಟದ ಮೇಲಿರುವ ಹಿಡಿಂಬೇಶ್ವರ, ಸಿದ್ಧೇಶ್ವರ, ಫಲ್ಗುಣೇಶ್ವರ, ಮತ್ತು ಏಕನಾಥೇಶ್ವರ ದೇವಾಲಯಗಳು ಗರ್ಭಗೃಹಗಳು ಗವಿಯಲ್ಲಿವೆ. ಇವುಗಳಲ್ಲಿ ಕೆಲವಾದರೂ 8-9 ನೆ ಶತಮಾನಕ್ಕೆ ಸೇರಿದವು. ಇವು ಈ ಜಿಲ್ಲೆಯ ಪ್ರಾಚೀನ ದೇವಾಲಯಗಳು.

	ಮದರಿಕಲ್ಲು ಎಂಬ ಹೆಸರಿನಿಂದ ನೊಳಂಬ ಪಲ್ಲವರ ಪ್ರಾಂತ್ಯವೊಂದರ ರಾಜಧಾನಿಯಾಗಿದ್ದ ಚಿಕ್ಕಮಧುರೆಯಲ್ಲಿ ನೊಳಂಬ ಪಲ್ಲವಾಧಿರಾಜನ ರಾಣಿ ಮತ್ತು ಪಲ್ಲವ ಮಲ್ಲನ ತಾಯಿ ಗವಗಣಬ್ಬೆ 790 ರಲ್ಲಿ ಗವಗಣೇಶ್ವರ ಎಂಬ ಶಿವಾಲಯವನ್ನು ಕಟ್ಟಿಸಿದಳು. ಈಗ ಶಿಥಿಲಾವಸ್ಥೆಯಲ್ಲಿರುವ, ಸರಳವಾದ ಈ ದೇವಾಲಯದಲ್ಲಿ ಚೌಕನಾದ ಕಂಬಗಳೂ ತೆಳುವಾಗಿ ಉಬ್ಬಿಸಿ ಬಿಡಿಸಿದ ಸಪ್ತಮಾತೃಕೆ, ಸೂರ್ಯ ಮೊದಲಾದ ಚಿಕ್ಕಚಿಕ್ಕ ಮೂರ್ತಿಗಳೂ ಇವೆ. ನೊಳಂಬರ ಮೊದಮೊದಲ ಶಿಲ್ಪ ಶೈಲಿಯನ್ನು ಇಲ್ಲಿ ಗಮನಿಸಬಹುದು. ಚಿಕ್ಕಮಧುರೆ ಮತ್ತು ಹಿರೆಮಧುರೆಗಳಲ್ಲಿ ನೊಳಂಬರ ಕಾಲದ ಹಲವು ವೀರಗಲ್ಲುಗಳಿವೆ. ಕತ್ತಿ ಗುರಾಣಿಗಳನ್ನು ಹಿಡಿದು ನಿಂತ ಭವ್ಯಾಕೃತಿಗಳನ್ನು ಅವುಗಳಲ್ಲಿ ಕಂಡಿರಿಸಿದೆ. ಪ್ರಭಾಕರದಾಸ ಮುಂತಾದ ಕೆಲವು ವೀರರ ಹೆಸರುಗಳು ಮಾತ್ರ ಈ ವೀರಗಲ್ಲುಗಳಲ್ಲಿ ಇರುವುದುಂಟು. ತಮಟ ಕಲ್ಲಿನಲ್ಲಿ ಎರಡು ಕಲ್ಲುಗಳ ಮೇಲೆ ದಪ್ಪ ಅಕ್ಷರಗಳಲ್ಲಿ ಸುಂದರವಾಗಿ ಕಡೆದಿರುವ 8ನೆಯ ಶತಮಾನದ ಶಾಸನವೊಂದಿದೆ. ಇದು ಮಾಸಿಕ್ಕಾಪುರಾಧಿನಾಥನಾಗಿದ್ದ ಗುಣಮಧುರನೆಂಬ ವೀರನನ್ನು ಮನೋಜ್ಞವಾಗಿ ವರ್ಣಿಸುತ್ತದೆ. ಚಿತ್ರದುರ್ಗದ ಬಳಿ ಗೋವನೂರು ಎಂಬಲ್ಲಿ ದೊರೆತ, ಈಗ ಚಿತ್ರದುರ್ಗದ ವಸ್ತುಸಂಗ್ರಹಾಲಯದಲ್ಲಿರುವ, ಸಪ್ತಮಾತೃಕೆಯರ ಮೂರ್ತಿಗಳು ಗವಗಣೇಶ್ವರ ದೇವಾಲಯದ ಶಿಲ್ಪದ ಮಾದರಿಯಲ್ಲಿದೆ. ಇವು ನೊಳಂಬರ ಶಿಲ್ಪಕ್ಕೆ ಮಾದರಿಗಳಾಗಿವೆ.

	ರಾಷ್ಟ್ರಕೂಟರ ಕಾಲದಲ್ಲಿ, ಸು. 10ನೆಯ ಶತಮಾನದಲ್ಲಿ ಕಟ್ಟಿದ್ದಿರಬಹುದಾದ ನಂದ ಗುಡಿಯ ಈಶ್ವರ ದೇವಾಲಯ ಈ ಜಿಲ್ಲೆಯಲ್ಲಿರುವ ಕೆಲವೇ ಪ್ರಾಚೀನ ದೇವಾಲಯಗಳಲ್ಲಿ ಪ್ರಮುಖವಾದದ್ದು. ಹೊರಭಾಗ ಹೆಚ್ಚು ಬದಲಾವಣೆ ಹೊಂದಿ ತೀರ ಸಾಮಾನ್ಯವಾದುದಾಗಿ ಕಂಡರೂ ಅಲ್ಲಿರುವ ಬೃಹದಾಕಾರದ ನಂದಿ, ವಿಶಾಲವಾದ ಮಧ್ಯದ ಅಂಕಣವನ್ನು ಹೊಂದಿರುವ ನವರಂಗದ ಕಂಬಗಳು, ವೈವಿಧ್ಯಮಯವಾಗಿ ಕಂಡರಿಸಿರುವ ಸುಕಾನಾಸಿಯ ಬಾಗಿಲುವಾಡ, ಅದರ ಇಕ್ಕೆಲಗಳಲ್ಲಿ ಉನ್ನತವಾಗಿ ನಿಂತಿರುವ ದ್ವಾರಪಾಲಕರು-ಇವೆಲ್ಲವೂ ಆಕರ್ಷಣೀಯವಾಗಿದೆ. ರಾಷ್ಟ್ರಕೂಟ ಸುವರ್ಣವರ್ಷನ ಆಳ್ವಿಕೆಯಲ್ಲಿ ಅಲ್ಲಿಗನೆಂಬ ವೀರ ತನ್ನ ಒಡೆಯನ ಸಾವಿನಿಂದಾಗಿ ಕೀಲ್ಗುಣಿಯಾಗಿದ್ದದನ್ನು ಈ ದೇವಾಲಯದ ಬಳಿ ಇರುವ ವೀರಗಲ್ಲೊಂದು ತಿಳಿಸುತ್ತದೆ. 
ಜಂಟಿಗರಾಮೇಶ್ವರ ಬೆಟ್ಟದ ಮೇಲಿರುವ 10ನೆಯ ಶತಮಾನದ ಶಾಸನವೊಂದಿದೆ. ಅದು ಜಟಾಯುವನ್ನು ರಾವಣ ವಧಿಸಿದ ತಾಣವೆಂದು ಶ್ರೀರಾಮ ಜಟಾಯುವಿಗೆ ಸಂಸ್ಕಾರ ಮಾಡಿ ಇಟ್ಟಿಗೆಯಲ್ಲಿ ಜಟತಂಗ ರಾಮೇಶ್ವರ ದೇವಾಲಯವನ್ನು ಕಟ್ಟಿಸಿದನೆಂದೂ ಈ ದೇವಾಲಯವನ್ನು ಕಲ್ಲಿನಿಂದ ಪುನರ್ನಿರ್ಮಾಣ ಮಾಡಿದುದಾಗಿಯೂ ಈ ಶಾಸನ ತಿಳಿಸುತ್ತದೆ. ಅಶೋಕನ ಶಾಸನದ ಬಳಿಯೇ ಇರುವ ಈ ದೇವಾಲಯ ಬಹುಶಃ ಇಟ್ಟಿಗೆಯಿಂದ ಕಟ್ಟಿದ ಚೈತ್ಯಾಲಯವಾಗಿತ್ತು. 10ನೆಯ ಶತಮಾನದ ಹೊತ್ತಿಗಾಗಲೇ ಮೇಲಿನ ಪ್ರತೀತಿ ಹರಡಿದ್ದಿರಬೇಕು.

	ಹರಿಹರದ ಹರಿಹರೇಶ್ವರ ದೇವಾಲಯ ಅಥವಾ ಶಂಕರನಾರಯಣ ದೇವಾಲಯ 11 ನೆಯ ಶತಮಾನದ ಹೊತ್ತಿಗೆ ಆಗಲೇ ಪ್ರಸಿದ್ಧವಾಗಿತ್ತು. ಆದರೆ ಮೂಲಮೂರ್ತಿಯೊಂದನ್ನು ಬಿಟ್ಟು ಆಗಿನ ದೇವಾಲಯ ಉಳಿದುಬಂದಿಲ್ಲ. ಈಗ ಇರುವ ದೇವಾಲಯವನ್ನು ಹೊಯ್ಸಳ ಮಂತ್ರಿ ಪೋಲಾಳ್ವ ದಂಡನಾಥ 1224 ರಲ್ಲಿ ಕಟ್ಟಿಸಿದ. ಇದಕ್ಕೆ ಮಹಾದ್ವಾರವನ್ನು 1268ರಲ್ಲಿ ಹೊಯ್ಸಳ ದಂಡನಾಯಕ ಸೋಮನಾಥ ಕಟ್ಟಿಸಿದ. ಈ ದೇವರಿಗೆ ಉಚ್ಚಂಗಿ ಪಾಂಡ್ಯರು, ಕಲಚೂರ್ಯ, ಬಿಜ್ಜಳ, ಯಾದವರು, ಹೊಯ್ಸಳರು ಮತ್ತು ವಿಜಯನಗರದ ಅರಸರು ದತ್ತಿ ಬಿಟ್ಟಿದ್ದಾರೆ. ಶಾಸನಗಳಲ್ಲಿ ವರ್ಣಿತವಾಗಿರುವ ಈ ಹೊಯ್ಸಳ ದೇವಾಲಯ ಪೂರ್ಣವಾಗಿ ಉಳಿದುಬಂದಿಲ್ಲವಾದರೂ ಇದು ಜಿಲ್ಲೆಯಲ್ಲೇ ಅತ್ಯಂತ ಸುಂದರವಾದ ದೇವಾಲಯ. ಇದರ ಸುತ್ತಲೂ ಅನೇಕ ಶಾಸನಗಳಿವೆ. ಅವುಗಳಲ್ಲಿ ಒಂದು 16 ಅಡಿಗಳಿಗೂ ಎತ್ತರವಾಗಿದೆ.

	ಚಾಳುಕ್ಯರ ಕಾಲದಲ್ಲೂ ಹೊಯ್ಸಳರ ಕಾಲದಲ್ಲೂ ಈ ಜಿಲ್ಲೆಯಲ್ಲಿ ಹಲವಾರು ದೇವಾಲಯಗಳು ನಿರ್ಮಿತವಾದವು. ಹಾನೆಯದ ಅಕ್ಕತಂಗಿಯರ ಗುಡಿ, ಕೊಡಗನೂರಿನ ವಿಷ್ಣು ದೇವಾಲಯ(1113), ಸೋಮೇಶ್ವರ ದೇವಾಲಯ(1101), ಕಬ್ಬೂರಿನ ಅವಿಮುಕ್ತೇಶ್ವರ ದೇವಾಲಯ (1114), ಮಳಲಕೆರೆಯ ಲಿಂಗ, ಜನಾರ್ದನ ಮತ್ತು 
ಸೂರ್ಯನಾರಾಯಣರನ್ನೊಳಗೊಂಡ ತ್ರಿಕೂಟಾಚಲ (1071), ಕಂದಗಲ್ಲಿನ ಕಲ್ಲೇಶ್ವರ, ಲೋಕೀಕೆರೆಯ ಕೇತೇಶ್ವರ, ಮತ್ತು ಕೋಡಿ ಕಲ್ಲೇಶ್ವರ ಮತ್ತು ಆನೆಕೊಂಡದ ಈಶ್ವರ ದೇವಾಲಯಗಳನ್ನು ಹೆಸರಿಸಬಹುದು. ಆದರೆ ಈ ದೇವಾಲಯಗಳಲ್ಲಿ ಬಹುಭಾಗ ಹಾಳಾಗಿವೆ ಅಥವಾ ಅವನ್ನು ರಕ್ಷಿಸುವುದಕ್ಕಾಗಿ ಮಣ್ಣಿನ ದಿಬ್ಬದಿಂದ ಮುಚ್ಚಿಹಾಕಿದೆ. ಹೊರನೋಟಕ್ಕೆ ಬರಿಯ ಮಣ್ಣಿನ ಗುಡ್ಡೆಗಳಾಗಿ ಕಂಡರೂ ಬಾಗಿಲುಗಳ ಮೂಲಕ ಅವುಗಳ ಒಳಹೊಕ್ಕಾಗ ಚಾಳುಕ್ಯರ ಶಿಲ್ಪದ ಸುಂದರ ಪರಿಚಯ ಆಗುತ್ತದೆ. ಅವುಗಳಲ್ಲೆಲ್ಲಾ ಆನೆಕೊಂಡದ ಈಶ್ವರ ದೇವಾಲಯದ ನವರಂಗದ ಕಲ್ಲುಗಳು ವೈವಿಧ್ಯಮಯವಾಗಿಯೂ ಸುಂದರವಾಗಿಯೂ ಇವೆ. ಕಂಡರಣೆಗಳಲ್ಲಿ ಇವು ಬೇಲೂರಿನ ಕಂಬಗಳನ್ನು ನೆನಪಿಗೆ ತರುತ್ತವೆ. ಈ ದೇವಾಲಯದ ಮತ್ತು ಲೋಕೀಕೆರೆಯ ಕೇತೇಶ್ವರ ದೇವಾಲಯದ ಹೊರಗೆ ಮುಚ್ಚಿದ್ದ ಮಣ್ಣಿನ ರಾಶಿಗಳನ್ನು ಈಚೆಗೆ ತೆಗೆದು, ಈ ದೇವಾಲಯಗಳ ಹೊರನೋಟ ಕಾಣುವಂತೆ ಮಾಡಿದ್ದಾರೆ. ಲೋಕೀಕೆರೆಯ ಕೇತೇಶ್ವರ ದೇವಾಲಯವನ್ನು ಕಟ್ಟಿಸಿದವರು ಉಚ್ಚಂಗಿ ಪಾಂಡ್ಯರೆಂಬುದು ಮಣ್ಣಿನ ರಾಶಿಯಲ್ಲಿ ಹೂತುಹೋಗಿದ್ದ ಶಾಸನವೊಂದರಿಂದ ತಿಳಿದುಬಂದಿದೆ. ಹರಿಹರಕ್ಕೆ 8 ಮೈಲಿ ದೂರದಲ್ಲಿರುವ ನಂದಿತಾವರೆಯಲ್ಲಿ ಹೊಯ್ಸಳ ಅಧಿಕಾರಿ ಮಾಣಿಕಣ್ಣ 1220ರಲ್ಲಿ ಕಟ್ಟಿಸಿದ ಒಂದು ಸುಂದರವಾದ ಹೊಯ್ಸಳ ದೇವಾಲಯವಿದೆ. ಇದು ಅಮೃತಲಿಂಗ ಮಾಣಿಕೇಶ್ವರ ದೇವಾಲಯ. ಇದರ ಹೊರಗೂ ಒಳಗೂ ನಿಬಿಡವಾಗಿ ಬಿಡಿಸಿರುವ ಅಲಂಕರಣಗಳು ಮೂರ್ತಿಶಿಲ್ಪಗಳಿಂದ ಕೂಡಿವೆ. ಹೊರ ಗೋಡೆಯ ಮೇಲೆ 2 ಅಡಿ ಎತ್ತರದ ಮೂರ್ತಿಗಳ ಸಾಲಿದೆ. ಸಾಮಾನ್ಯವಾಗಿ ಹೊಯ್ಸಳ ದೇವಾಲಯಗಳಲ್ಲಿರುವಂತೆ ಅವುಗಳ ಮೇಲೆ ಬಳ್ಳಿವಿತಾನಗಳಿಲ್ಲ. ನವರಂಗದ ಚಾವಣಿಗಳು ಚಪ್ಪಟೆಯಾಗಿವೆ. ನಡುವಿನ ಅಂಕಣದಲ್ಲಿ ತಾಂಡವೇಶ್ವರ ಮತ್ತು ಅಷ್ಟದಿಕ್ಪಾಲಕರ ಮೂರ್ತಿಗಳಿವೆ. ಒಂದೊಂದು ಮೂರ್ತಿಯ ಸುತ್ತಲೂ ಗಾಯಕರು, ನರ್ತಕರು, ವಾದ್ಯಗಾರರು ಮತ್ತು ಸೈನಿಕರು ತುಂಬಿರುವ ಈ ಶಿಲ್ಪ ಬಹಳ ಅಪರೂಪವಾದದ್ದು.

	ಚಿತ್ರದುರ್ಗದ ಪಾಳೆಯಗಾರರು ಕಟ್ಟಿಸಿದ ಹಲವು ದೇವಾಲಯಗಳು ಇತರ ಕಟ್ಟಡಗಳು ಚಿತ್ರದುರ್ಗದ ಬೆಟ್ಟದ ಮೇಲೂ ಇತರ ಕಡೆಗಳಲ್ಲೂ ಉಳಿದುಬಂದಿವೆ. ನೀರ್ತಡಿಯಲಿ ಇವರು ಪುನರ್ನಿರ್ಮಾಣ ಮಾಡಿದ ರಂಗನಾಥ ದೇವಾಲಯದ ಹೊರಗೋಡೆಯ ಮೇಲಿನ ಮೂರ್ತಿಶಿಲ್ಪಗಳು ವಿಜಯನಗರ ಶಿಲ್ಪದ ಅನುಕರಣೆ. ಇದರ ಉನ್ನತವಾದ ಗರ್ಭಗುಡಿಯ ಶಿಲಾಗೋಪುರ ವಿಶಿಷ್ಟವಾದ್ದು ನಾಯಕನಹಟ್ಟಿಯ ದಕ್ಷಿಣಕ್ಕೆ ತಗ್ಗಾದ ಕಲ್ಲುಮೊರಡಿಯೊಂದರ ಇಳಿಜಾರಿನಲ್ಲಿ ಬಂಡೆಯನ್ನು ಕತ್ತರಿಸಿ ಕೊರೆದು, ನಾಲ್ಕು ಕಂಬಗಳ ಆದಾರದ ಮೇಲೆ ನಿಂತ ಹಜಾರದಂಥ ಗವಿಯೊಂದನ್ನು ನಿರ್ಮಿಸಿ, ಕಂಬಗಳ, ಚಾವಣಿಯ ಮತ್ತು ಅಡ್ಡತೊಲೆಗಳ ಮೇಲೆಲ್ಲಾ ನವುರಾದ ಶಿಲ್ಪವನ್ನು ಬಿಡಿಸಲಾಗಿದೆ. ಇದು ನಾಯಕರ ವಾಸ್ತುಶಿಲ್ಪದ ಒಂದು ಅಪೂರ್ವ ಮಾದರಿ. ಹಾಗೆಯೇ ಅವರು ಚಿತ್ರದುರ್ಗದ ಬೆಟ್ಟದ ಮೇಲೆ ಕಟ್ಟಿಸಿದ ಹಲವು ಸುತ್ತುಗಳ ಅಭೇದ್ಯ ಕೋಟೆಯನ್ನು ಹೈದರನು ಟೀಪುವೂ ಮತ್ತಷ್ಟು ಭದ್ರಪಡಿಸಿದರು. ಅದು ಈಗಲೂ ಅಚ್ಚಳಿಯದೆ ಉಳಿದುಬಂದಿದೆ.

	ಚಿತ್ರದುರ್ಗ ಪಟ್ಟಣ ಈಗ ಬಂಡೆಗಲ್ಲುಗಳಿಂದಾವೃತವಾದ ಬೆಟ್ಟದ ಬುಡದಲ್ಲಿ ಇದೆಯಾದರೂ ಹಿಂದೆ ಬೆಟ್ಟದ ಮೇಲೆಯೇ ಇತ್ತು; ಹಲವು ಸಾಲು ರಕ್ಷಣಾಕೋಟೆಗಳಿಂದ ಸುತ್ತುವರಿಯಲ್ಪಟ್ಟಿತ್ತು. ಚಾಲುಕ್ಯರ ಕಾಲದಲ್ಲಿ ಸೂಳ್ಗಲ್ಲು ಎಂದೂ, ಹೊಯ್ಸಳರ ಕಾಲದಲ್ಲಿ ಬೆಮ್ಮಾತ್ತನಕಲ್ಲು, ಬ್ರಹ್ಮಪುರಿಗಿರಿ, ಪೆರುಮಾಳೆಪುರ ಎಂಬ ಹೆಸರುಗಳೂ ಇದ್ದವು. ಹಿಡಿಂಬಪಟ್ಟಣ, ಚಿನ್ಮೂಲಾದ್ರಿ ಎಂಬ ಪೌರಾಣಿಕ ಹೆಸರುಗಳೂ ಶಾಸನದಲ್ಲಿ ಕಾಣಿಸಿಕೊಳ್ಳುತ್ತವೆ. ವಿಜಯನಗರದ ಮತ್ತು ಪಾಳೆಯಗಾರರ ಆಳ್ವಿಕೆಯಲ್ಲಿ ಚಿತ್ರಕಲ್ದುರ್ಗ, ಚಿತ್ತನಕಲ್‍ದುರ್ಗ, ಚಿತ್ರದುರ್ಗ ಎಂದೂ ಹೆಸರುಗಳಿದ್ದವು. ಹೈದರ್ ಇದಕ್ಕೆ ಫರೂಕೈಯಾಬ್ ಹಿಸ್ಸಾರ್ ಎಂಬ ಹೆಸರಿಟ್ಟಿದ್ದ. ಈ ಬೇರೆ ಬೇರೆ ಕಾಲದಲ್ಲಿ ಇಲ್ಲಿ ನಿರ್ಮಿಸಿರುವ ದೇವಾಲಯಗಳು, ಕೋಟೆಗಳು ಮತ್ತು ಇತರ ಕಟ್ಟಡಗಳು ಈಗಲೂ ಉಳಿದುಬಂದಿದೆ.

	ಚಾಚುಬಂಡೆಗಳ ಬುಡದಲ್ಲಿ ಉಂಟಾಗಿರುವ ಗವಿಗಳಲ್ಲಿರುವ ಹಿಡಿಂಬೇಶ್ವರ, ಸಿದ್ದೇಶ್ವರ, ಫಲ್ಗುಣೇಶ್ವರ ಏಕನಾಥೇಶ್ವರಿ ಗುಹಾ ದೇವಾಲಯಗಳು ಪುರಾತನವಾದವು. ಇವುಗಳ ಮೇಲಿನ ಬಂಡೆಯ ಮೇಲೆ ಚಾಳುಕ್ಯರೀತಿಯ ಶಿಖರಗಳಿವೆ. ಹೊಯ್ಸಳರ ಕಾಲದಲ್ಲಿ ನವರಂಗ, ಮುಖಮಂಟಪಗಳು ನಿರ್ಮಿತವಾದವು. ಹೊಯ್ಸಳರ ಕಾಲವಾದರೂ ಇವು ಕಗ್ಗಲ್ಲಿನ ಕಟ್ಟಡಗಳೇ, ಸಿದ್ದೇಶ್ವರ, ಹಿಡಿಂಬೇಶ್ವರ ದೇವಾಲಯಗಳ ಮುಂದೆ, ಹಿಡಿಂಬ ರಥ, ಭೀಮರಥಗಳೆಂದು ಜನ ಕರೆಯುವ ಮೂರಂತಸ್ತಿನ ವಿಶಿಷ್ಟರೀತಿಯ ಮಹಾದ್ವಾರ ಗೋಪುರಗಳು ವಿಜಯನಗರದ ಒಂದನೆಯ ದೇವರಾಯನ ಮಗ ಮಲ್ಲಣ್ಣ ಒಡೆಯ ಕಟ್ಟಿಸಿದುದಾಗಿ ತಿಳಿದು ಬರುತ್ತದೆ.

	ಪಾಳೆಯಗಾರರು ಇಲ್ಲಿ ಕಟ್ಟಿಸಿರುವ ಅನೇಕ ಕಟ್ಟಡಗಳಲ್ಲಿ ಮುಖ್ಯವಾದವು ಇಡೀ ಬೆಟ್ಟವನ್ನೇ ಬಳಸಿ ನಿಂತಿರುವ ಐದು ಭದ್ರವಾದ ಕೋಟೆಗಳು. ಬೃಹದ್ಗಾತ್ರದ ಕಲ್ಲುಗಳಿಂದ ಕಟ್ಟಿರುವ ಗೋಡೆಗಳು, ದುರ್ಗಮವಾದ ದ್ವಾರಗಳು, ಈ ಕೋಟೆಗಳಿಗೆ ಹೊಂದಿಕೊಂಡಂತೆ ಇರುವ ಎಣ್ಣೆಕೊಳ, ತುಪ್ಪದ ಕೊಳ ಎಂದು ಕರೆಯುವ — ಕಲ್ಲಿನಲ್ಲಿಯೇ ಕೊರೆದು ಮಾಡಿರುವ—ದೊಡ್ಡದೊಡ್ಡ ತೊಟ್ಟಿಗಳು, ಮದ್ದನ್ನರೆಯಲು ಉಪಯೋಗಿಸುತ್ತಿದ್ದ ಭಾರಿಯಾದ ಬೀಸುವ ಕಲ್ಲುಗಳು ನಾಯಕರ ಕಾಲದ ಶಕ್ತಿಯ ಸಂಕೇತಗಳಾಗಿ ನಿಂತಿವೆ. ಬೆಟ್ಟದ ಮೇಲೆ ಏಕನಾಥೇಶ್ವರಿ ದೇವಾಲಯದ ಮುಂದೆ 40' ಗೂ ಹೆಚ್ಚು ಎತ್ತರವಾಗಿ ನಿಂತಿರುವ ಕಂಬ, ಉಯ್ಯಾಲೆಕಂಬಗಳು, ಬೆಟ್ಟದತುದಿಯಲ್ಲಿರುವ ಅರಮನೆಯ ಅವಶೇಷಗಳು, ಬುಡದಲ್ಲಿರುವ ಉಚ್ಚಂಗಮ್ಮನ ದೇವಾಲಯ, ಊರಿನಲ್ಲಿರುವ ಕೆಳಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ ಮೊದಲಾದವು ನಾಯಕರ ಕಾಲದ ಸಾಧನೆಗಳು, ಹೈದರ್ ಮತ್ತು ಟೀಪು ಇಲ್ಲಿಯ ಕೋಟೆಗಳನ್ನು ಮತ್ತಷ್ಟೂ ಭದ್ರಪಡಿಸಿ ಅರಮನೆ ಮತ್ತು ಮಸೀದಿಗಳನ್ನು ಕಟ್ಟಿಸಿದನು. ತನ್ನ ಪ್ರಾಚೀನ ವೈಭವವನ್ನು ಕಳೆದುಕೊಂಡ ಊರು ಈಗ ಪ್ರೇಕ್ಷಣೀಯ ಸ್ಥಳವಾಗಿ ಉಳಿದಿದೆ. 				(ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ